ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣದೊಂದಿಗೆ, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆಯ ಸಾಧ್ಯತೆಗಳಿವೆ.
ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ಮುಂದೆ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆಗಳಿದ್ದು, ನವೆಂಬರ್ 1ರಿಂದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ.
ಮಲೆನಾಡು : ಕೊಡಗು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಒಂದೆರಡು ಕಡೆ ಸಂಜೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಸಕ್ಲೇಶ್ಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ನವೆಂಬರ್ 1ರಿಂದ ಮತ್ತೆ ಮಳೆ ಆರಂಭವಾಗುವ ಲಕ್ಷಣಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೂ ಒಣ ಹವೆ ಮುಂದುವರಿಯಲಿದೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ, ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ, ರಾಮನಗರ, ಬೆಂಗಳೂರು, ಕೋಲಾರ ಜಿಲ್ಲೆಗಳ ತಮಿಳುನಾಡು ಗಡಿಭಾಗಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಕ್ಟೊಬರ್ 26ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.
ಆದರೆ ನವೆಂಬರ್ 1ರಿಂದ ಮಳೆ ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ.
ದಕ್ಷಿಣ ಕೇರಳ ಕರಾವಳಿಯ ವಾಯುಭಾರ ಕುಸಿತವು ಶಿಥಿಲಗೊಂಡಿದ್ದು, ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ತೀವ್ರಗೊಳ್ಳುತ್ತಿದ್ದು, 27 ರಂದು ಚಂಡಮಾರುತವಾಗಿ ಆಂದ್ರಾ ಕರಾವಳಿಗೆ ತಲುಪಲಿದೆ. ಈ "ಅರ್ನಬ್" ಚಂಡಮಾರುತವು 28ರ ರಾತ್ರಿ ಆಂದ್ರಾದ ಓಂಗಾಲ್ ಹಾಗೂ ಮಚಲೀಪಟ್ಟಣ ಮಧ್ಯ ಭೂ ಪ್ರವೇಶಿಸುವ ಸಾಧ್ಯತೆಗಳಿದ್ದು, ಅಲ್ಲಿಂದ ನೇರವಾಗಿ ಉತ್ತರ ಪ್ರದೇಶ, ನೇಪಾಳ ತನಕ ಉತ್ತರ ದಿಕ್ಕಿಗೆ ಚಲಿಸುವ ಲಕ್ಷಣಗಳಿವೆ.
ಒಕ್ಟೊಬರ್ 30ರ ಸುಮಾರಿಗೆ ಈ ಚಂಡಮಾರುತವು ನೇಪಾಳದಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ.
ಒಕ್ಟೊಬರ್ 31ರಂದು ದಕ್ಷಿಣ ಅಂಡಮಾನ್ ಬಳಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ನವೆಂಬರ್ 1 ಅಥವಾ 2ರಂದು ಶ್ರೀಲಂಕಾ ಕರಾವಳಿಗೆ ತಲಪುವ ನಿರೀಕ್ಷೆಯಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಮಳೆ ಪ್ರಾರಂಭವಾಗುವ ಸೂಚನೆಗಳಿವೆ.
No comments:
Post a Comment