ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣದೊಂದಿಗೆ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಸಾಧ್ಯತೆಗಳಿವೆ.
ಈಗಿನಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಕ್ಟೊಬರ್ 25ರಿಂದ ಹಾಗೂ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಕ್ಟೊಬರ್ 26ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.
ಮಲೆನಾಡು : ಕೊಡಗು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಹಾಸನದ ಸಕ್ಲೇಶ್ಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ, ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಒಕ್ಟೊಬರ್ 26ರಿಂದ ಮಳೆ ಕಡಿಮೆಯಾಗುವ ಸೂಚನೆಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಕ್ಟೊಬರ್ 25ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಕೋಲಾರ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಚಿಕ್ಕಬಳ್ಳಾಪುರ, ತುಮಕೂರು (ಪಾವಗಢ ಸಹಿತ), ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಕ್ಟೊಬರ್ 26ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ.
ದಕ್ಷಿಣ ಕೇರಳ ಕರಾವಳಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಬಂಗಾಳಕೂಲ್ಲಿಯ ಚಂಡಮಾರುತದ ಪ್ರಭಾವದಿಂದ ಒಕ್ಟೊಬರ್ 26ರಂದು ದಕ್ಷಿಣ ಕೇರಳ ಪ್ರವೇಶಿಸಿ ಶಿಥಿಲಗೊಳ್ಳುವ ಸಾಧ್ಯತೆಗಳಿವೆ.
ಬಂಗಾಳಕೊಲ್ಲಿಯಲ್ಲಿ ಈಗಾಗಲೇ ವಾಯುಭಾರ ಕುಸಿತ ಉಂಟಾಗಿದ್ದು, ಒಕ್ಟೊಬರ್ 26ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಲಕ್ಷಣಗಳಿವೆ.
ಈಗಿನಂತೆ ಒಕ್ಟೊಬರ್ 28ರಂದು ಆಂದ್ರಾದ ಮಚಲೀಪಟ್ಟಣ ಮೂಲಕ ಪ್ರವೇಶಿಸಿ ನೇರವಾಗಿ ಉತ್ತರಕ್ಕೆ ಚಲಿಸುವ ಸಾಧ್ಯತೆಗಳಿವೆ.
ಒಕ್ಟೊಬರ್ 30ರ ನಂತರ ಈ ಚಂಡಮಾರುತ ಶಿಥಿಲಗೊಳ್ಳುತ್ತಿದ್ದಂತೆಯೆ ಫೆಸಿಫಿಕ್ ಸಾಗರದ ಕಡೆಯಿಂದ ಮಲೇಶಿಯಾ, ಸಿಂಗಾಪುರ, ಸುಮಾತ್ರ ದ್ವೀಪಗಳನ್ನು ದಾಟಿ ಬಂಗಾಳಕೊಲ್ಲಿಗೆ ಪ್ರವೇಶಿಸುವ ಲಕ್ಷಣಗಳಿದ್ದು, ಇದರಿಂದ ರಾಜ್ಯದಲ್ಲಿ ನವೆಂಬರ್ ಮೊದಲವಾರದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಇದರ ಪ್ರಭಾವದಿಂದ ಹಿಂಗಾರು ಮಾರುತಗಳು ಬಲಗೊಳ್ಳುವ ಲಕ್ಷಣಗಳಿವೆ.
No comments:
Post a Comment