ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಸಂಜೆ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ತುಂತುರು ಹಾಗೂ ಒಂದೆರಡು ಕಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅತಿ ದುರ್ಬಲ ಮುಂಗಾರು ಮುಂದುವರಿಯಲಿದ್ದು, ಜೂನ್ 22ರಿಂದ ಮುಂಗಾರು ಅಲ್ಪ ಚೇತರಿಕೆ ಕಾಣಬಹುದು.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಸಂಜೆ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ದುರ್ಬಲ ಮುಂಗಾರು ಮುಂದುವರಿಯಲಿದೆ.
ಮುಂದಿನ 10 ದಿನಗಳವರೆಗೂ ಜೋರು ಮಳೆಯ ಸಾಧ್ಯತೆ ಕಡಿಮೆಯಾಗಿದ್ದು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಮಳೆಯ ಸಾಧ್ಯತೆಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು, ಮಳಯ ಸಾಧ್ಯತೆಗಳು ಕಾಣುತ್ತಿಲ್ಲ.
ಈಗಿನಂತೆ ಜೂನ್ 23ರಿಂದ ಅಲ್ಲಲ್ಲಿ ಮಳೆ ಆರಂಭವಾಗುವ ಲಕ್ಷಣಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಸಂಜೆ ತುಂತುರು ಮಳೆಯ ಮುನ್ಸೂಚನೆ ಇದೆ.
ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಸೂಚನೆಗಳಿವೆ.
ಮುಂಗಾರು ಅತಿ ದುರ್ಬಲವಾಗಿರುವುದರಿಂದ ಅಧಿಕ ಬಿಸಿಲಿನ ತಾಪಮಾನದಿಂದ ಸ್ಥಳೀಯವಾಗಿ ಉಂಟಾದ ಮೋಡಗಳಿಂದ ರಾಜ್ಯದ ಕೆಲವು ಸೀಮಿತ ಪ್ರದೇಶಗಳಲ್ಲಿ ಅನಿರೀಕ್ಷಿತ ಮಳೆಯಾಗುತ್ತಿದೆ.
ಎಲ್ ನಿನೋ ಆರಂಭವಾದ ವರದಿಗಳಿದ್ದು, ನವೆಂಬರ್ ತಿಂಗಳಲ್ಲಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳು ಇವೆ.
No comments:
Post a Comment