ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ನಿನ್ನೆ ಮಧ್ಯಮ ಸ್ತರದ ಭಾರಿ ಮೋಡಗಳು ಪಶ್ಚಿಮ ಘಟ್ಟದ ಸಾಲುಗಳಲ್ಲಿ ತಡೆಯಲ್ಘಪಟ್ಟಿದ್ದರಿಂದ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮುನ್ಸೂಚನೆಗೂ ಮೀರಿ ಅತಿ ಭಾರಿ ಮಳೆಯಾಗಿತ್ತು. ಆದರೆ ಇವತ್ತು ಆ ಪರಿಸ್ಥಿತಿ ಇಲ್ಲ.
ಈಗಿನಂತೆ ಇವತ್ತಿನಿಂದ ದಿನಕಳೆದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಆಗಸ್ಟ್ 3ರಿಂದ ತೋಟಗಳಿಗೆ ಔಷಧಿ ಸಿಂಪಡಿಸಲು ಅವಕಾಶ ಸಿಗಬಹುದು. ಆದರೆ ಪೂರ್ತಿ ಮಳೆ ಬಿಟ್ಟು ಸಿಗುವ ಸಾಧ್ಯತೆಗಳಿಲ್ಲ.
ಮಲೆನಾಡು : ನಿನ್ನೆ ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು.
ಇವತ್ತು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಿರಬಹುದು. ಹಾಸನದ ಸಕ್ಲೇಶ್ಪುರ ಸುತ್ತಮುತ್ತ ಸಹ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಇವತ್ತಿನಿಂದ ದಿನಕಳೆದಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸೂಚನೆಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆಗಸ್ಟ್ 5ರ ತನಕ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಹಾಗೂ ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಆಗಸ್ಟ್ 9ರ ತನಕ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಬಂಗಾಳ ಕೊಲ್ಲಿಯ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ಆಗಸ್ಟ್ 4ರಂದು ಉಂಟಾಗುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು ಕಾಣುತ್ತಿಲ್ಲ ಹಾಗೂ ಆಗಸ್ಟ್ 7ರಂದು ದಕ್ಷಿಣ ಸುಮಾತ್ರ ದ್ವೀಪದ ಬಳಿ ಉಂಟಾಗಲಿರುವ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ದುರ್ಬಲವಾಗುವ ಸಾಧ್ಯತೆಗಳಿವೆ.
No comments:
Post a Comment