ಕರಾವಳಿ : ಅರಬ್ಬಿ ಸಮುದ್ರದಲ್ಲಿ ನಿನ್ನೆ ರಾತ್ರಿ ಉಂಟಾದ ತಿರುವಿಕೆಯ ಕಾರಣದಿಂದ ಇವತ್ತು ಮುಂಜಾನೆ ರಾಜ್ಯದ ಕರಾವಳಿ ತೀರ ಭಾಗಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.
ಈ ತಿರುಗುವಿಕೆಯ ಪರಿಸ್ಥಿತಿ ಇವತ್ತು ಸಂಜೆ, ರಾತ್ರಿ ಬದಲಾಗುವ ಸಾಧ್ಯತೆಗಳಿರುವುದರಿಂದ, ಸಂಜೆಯ ಒಳಗಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.
ಈಗಿನಂತೆ ಅರಬ್ಬಿ ಸಮುದ್ರದ ಈ ತಿರುಗುವಿಕೆಯು ಪಶ್ಚಿಮಾಭಿಮುಖವಾಗಿ ಚಲಿಸುವ ಲಕ್ಷಣಗಳಿರುವುದರಿಂದ ಬಂಗಾಳಕೊಲ್ಲಿಯ ಗಾಳಿಯು ಅರಬ್ಬಿ ಸಮುದ್ರದ ಕಡೆಗೆ ಸೆಳೆಯಲ್ಪಡುತ್ತದೆ. ಇದರಿಂದ ನವೆಂಬರ್ 2ನೇ ತಾರೀಕಿನಿಂದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ಮಲೆನಾಡು : ಅರಬ್ಬಿ ಸಮುದ್ರದ ತಿರುವಿಕೆಯ ಕಾರಣದಿಂದ ಕೊಡಗು, ಹಾಸನದ ಸಕ್ಲೇಶ್ಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ತುಂತುರು ಮಳೆಯ ಸಾಧ್ಯತೆಗಳಿವೆ.
ಈಗಿನಂತೆ ನವೆಂಬರ್ 2ರಿಂದ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ, ಸಂಜೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ನವೆಂಬರ್ 2ರಿಂದ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ನವೆಂಬರ್ 1ರಿಂದ ಅಲ್ಲಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ.
ಅರಬ್ಬಿ ಸಮುದ್ರದ ಈಗಿನ ತಿರುವಿಕೆಯ ಪರಿಣಾಮದಿಂದ ಬಂಗಾಳಕೊಲ್ಲಿಯಲ್ಲಿ ಮಹತ್ವದ ಬದಲಾವಣೆ ಆಗುತ್ತಲಿದ್ದು, ಅಂಡಮಾನ್ ಬಳಿ ತಲುಪಿರುವ ತಿರುವಿಕೆಯು ಮುಂದೆ ವಾಯುಭಾರ ಕುಸಿತ ಅಥವಾ ಚಂಡಮಾರುತವಾಗುವ ಸಾಧ್ಯತೆಗಳು ಕಡಿಮೆಯಾಗಿದೆ. ನವೆಂಬರ್ 2ರಂದು ಆಂದ್ರಾದ ವಿಶಾಖಪಟ್ಟಣದ ಸಮೀಪ ದುರ್ಬಲಗೊಂಡು ಭೂ ಪ್ರವೇಶಿಸುವ ಸಾಧ್ಯತೆಗಳಿವೆ.
ಇದರ ಪರಿಣಾಮದಿಂದ ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ಗಾಳಿಯು ಆಂದ್ರಾ ಹಾಗೂ ತಮಿಳುನಾಡು ಮೂಲಕ ರಾಜ್ಯಕ್ಕೆ ಪ್ರವೇಶಿಸಿ ಅರಬ್ಬಿ ಸಮುದ್ರದ ಕಡೆಗೆ ಸೆಳೆಯಲ್ಪಡುವುದರಿಂದ ರಾಜ್ಯದಲ್ಲಿ ಮಳೆಯ ವಾತಾವರಣ ಉಂಟಾಗಲಿದೆ.
ಸುಮಾರು ನವೆಂಬರ್ 7 ಅಥವಾ 8ರ ತನಕ ಈ ಮಳೆ ಮುಂದುವರಿಯುವ ಲಕ್ಷಣಗಳಿವೆ.
No comments:
Post a Comment