ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಬಿಟ್ಟು ಬಿಟ್ಟು ಗಾಳಿಯೊಂದಿಗೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 8ರ ತನಕ ಇದೇ ವಾತಾವರಣ ಮುಂದುವರಿಯುವ ಲಕ್ಷಣಗಳಿದ್ದು, ನಂತರ ಮಳೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗಿ, ಜುಲೈ 11ರಿಂದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣದ ಸಾಧ್ಯತೆಗಳಿವೆ.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಬಿಟ್ಟು ಬಿಟ್ಟು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಜುಲೈ 8ರ ತನಕ ಇದೇ ವಾತಾವರಣ ಮುಂದುವರಿಯಲಿದ್ದು, ನಂತರ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗುವ ಸೂಚನೆಗಳಿವೆ. ಜುಲೈ 10ರಿಂದ ದಿನದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣ ಇರಬಹುದು.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಉತ್ತಮ ಹಾಗೂ ಕಲಬುರ್ಗಿ ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಉಳಿದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜುಲೈ 9ರ ತನಕ ಇದೇ ವಾತಾವರಣ ಮುಂದುವರಿಯಲಿದ್ದು, 10ರಿಂದ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗುವ ಸೂಚನೆಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 9ರ ತನಕ ಇದೇ ವಾತಾವರಣ ಮುಂದುವರಿಯುವ ಲಕ್ಷಣಗಳಿದ್ದು, 10ರಿಂದ ದಿನದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣ ಇರಬಹುದು.
ಮಹಾರಾಷ್ಟ್ರದ ಮುಂಬೈ ಕರಾವಳಿಯ ಕೆಳ ಸ್ತರದ ಅಧಿಕ ಒತ್ತಡದ ಪ್ರಭಾವದಿಂದ ರಾಜ್ಯವದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತೀವ್ರ ಗಾಳಿ ಬೀಸುತ್ತಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮುಂಬೈ ಹಾಗೂ ಉತ್ತರ ಮಹಾರಾಷ್ಟ್ರದ ಕರಾವಳಿಯಲ್ಲಿ ಇವತ್ತು ಹಾಗೂ ನಾಳೆ ಭಾರಿ ಮಳೆಯ ಮುನ್ಸೂಚನೆ ಇದ್ದು, ಜುಲೈ 8ರಿಂದ ಕಡಿಮೆಯಾಗಬಹುದು. ಈ ಅಧಿಕ ಒತ್ತಡ ಶಿಥಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲೂ ಎಲ್ನಿನೋ ಪ್ರಭಾವದಿಂದ ಮಳೆ ತೀವ್ರವಾಗಿ ಕಡಿಮೆಯಾಗಲಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಒಡಿಸ್ಸಾ ಮತ್ತು ಛತ್ತೀಸಗಡ ತಲುಪಿದ್ದು ಇನ್ನೆರಡು ದಿನಗಳಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ.
No comments:
Post a Comment