Advertise

25 January 2026

31.01.2026ರ ತನಕದ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ :

ಬಂಗಾಳಕೊಲ್ಲಿಯಲ್ಲಿ ಉಂಟಾದ ಉಷ್ಣ ಮಾರುತ ಪರಿಚಲನೆಯ (anti cyclonic circulation) ಪರಿಣಾಮದಿಂದ ಜನವರಿ 25ರಿಂದ ಕರಾವಳಿ ಜಿಲ್ಲೆಗಳಲ್ಲಿ ಛಳಿಯ ಪ್ರಮಾಣವು ಕಡಿಮೆಯಾಗಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಜನವರಿ 26 ಹಾಗೂ 27ರಂದು ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಗಳಿವೆ. 
ಇದರೊಂದಿಗೆ ವಾತಾವರಣದ ತೇವಾಂಶವು ಅಧಿಕವಾಗುವುದರಿಂದ ಮುಂದಿನ ದಿನಗಳಲ್ಲಿ ಛಳಿಯ ಪ್ರಮಾಣವೂ ಕಡಿಮೆಯಾಗಬಹುದು. 
ಜನವರಿ 28ರಿಂದ ಬಿಸಿಲು ಹಾಗೂ ಒಣ ಹವೆ ಆವರಿಸುವ ಲಕ್ಷಣಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು ಮುಂದಿನ 2 ದಿವಸಗಳ ಕಾಲ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿವೆ. 

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜನವರಿ 25ರಿಂದ ಛಳಿಯ ಪ್ರಮಾಣವು ಕಡಿಮೆಯಾಗಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 26 ಹಾಗೂ 27ರಂದು ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 28ರಿಂದ ಮಳೆ ಕಡಿಮೆಯಾಗಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿವೆ. ನಂತರ ಒಣ ಹವೆ ಮುಂದುವರಿಯಲಿದೆ. ಆದರೆ ಛಳಿಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿಲ್ಲ. 

ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಜನವರಿ 26ರಂದು ರಾತ್ರಿಯ ವೇಳೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 
ಉಳಿದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿವೆ. 28ರ ತನಕ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಲಕ್ಷಣಗಳಿದ್ದು, ನಂತರ ಒಣ ಹವೆ ಮುಂದುವರಿಯಲಿದೆ. ಆದರೆ ವಾತಾವರಣದ ತೇವಾಂಶ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಛಳಿಯ ಪ್ರಮಾಣವು ಕಡಿಮೆಯಾಗುವ ಸೂಚನೆಗಳಿವೆ. 

ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಜನವರಿ 25ರಿಂದ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಈ ಮೋಡದ ವಾತಾವರಣವು ಜನವರಿ 27ರ ತನಕ ಮುಂದುವರಿಯುವ ಸಾಧ್ಯತೆಗಳಿವೆ. ನಂತರ ಒಣ ಹವೆ ಮುಂದುವರಿಯಲಿದೆ. 

ಉತ್ತರ ಭಾರತದಲ್ಲಿ ಪಶ್ಚಿಮದ ವಾತಾವರಣದ ಅಸಮತೋಲನ (Western disturbance) ಪರಿಣಾಮದಿಂದ ಜಮ್ಮು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಭಾರಿ ಹಿಮಪಾತ ಅಥವಾ ಮಳೆಯಾಗುತ್ತಿರುವ ಪರಿಣಾಮದಿಂದ ವಾತಾವರಣದ ಉಷ್ಣಾಂಶವೂ ತೀವ್ರವಾಗಿ ಕುಸಿದಿದೆ. ಜನವರಿ 28ರ ತನಕ ದೆಹಲಿ, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 
ನಂತರದ ದಿನಗಳಲ್ಲಿ ಉತ್ತರ ಭಾರತದಲ್ಲಿ ಒಣ ಹವೆ ಮುಂದುವರಿದರೂ ಛಳಿಯ ಪ್ರಮಾಣ ಸಹ ಕಡಿಮೆಯಾಗುವ ಸಾಧ್ಯತೆಗಳಿವೆ. 



No comments:

Post a Comment

08.02.2026 ರಿಂದ 14.02.2026ರ ತನಕದ ಕರ್ನಾಟಕ ಹವಾಮಾನ ವರದಿ

08.02.2026ರಿಂದ 14.02.2026ರ ತನಕದ ಕರ್ನಾಟಕ ಹವಾಮಾನ ವರದಿ : ರಾಜ್ಯದಾದ್ಯಂತ ಈ ವಾರ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ ಹಾಗೂ...