ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆಯ ತೀವ್ರತೆ ಕಡಿಮೆಯಾಗುವ ಮುನ್ಸೂಚನೆ ಇದೆ. ಆದರೆ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಜೂನ್ 18ರಿಂದ ಮುಂದಿನ 10 ದಿನಗಳವರೆಗೂ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. ಜೂನ್ 19ರಿಂದ 21ರ ತನಕ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸಲು ಸಣ್ಣ ಅವಕಾಶ ಸಿಗಬಹುದು (ದಿನದಲ್ಲಿ 1 ಕೆಲವು ಭಾಗಗಳಲ್ಲಿ 2 ಬ್ಯಾರೆಲ್ ಸ್ಪ್ರೇ ಮಾಡಬಹುದು).
ಮಲೆನಾಡು : ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಕಡಿಮೆಯಾದರೂ, ಬಿಟ್ಟು ಬಿಟ್ಟು ಜೋರು ಮಳೆಯ ಮುನ್ಸೂಚನೆ ಇದೆ. ( ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಜಾಸ್ತಿ ಇರಬಹುದು). ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಾಮಾನ್ಯ ಹಾಗೂ ಉಳಿದ ಭಾಗಗಳಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಜೂನ್ 18ರಿಂದ ಮತ್ತಷ್ಟು ಕಡಿಮೆಯಾದರೂ ಜೂನ್ 22ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.
ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದ್ದು, ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಜೂನ್ 18ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡ, ಬಿಸಿಲಿನ ವಾತಾವರಣದ ಲಕ್ಷಣಗಳಿವೆ.
ಅರಬ್ಬಿ ಸಮುದ್ರದ ಗುಜರಾತ್ ಕರಾವಳಿಯಲ್ಲಿ ಹಾಗೂ ಬಂಗಾಳಕೊಲ್ಲಿಯ ಬಾಂಗ್ಲಾ ಕರಾವಳಿಯಲ್ಲಿ ವಾಯುಭಾರ ಕುಸಿತದಂತಹ ತಿರುಗುವಿಕೆಯು ದುರ್ಬಲಗೊಂಡರೂ ಸಂಪೂರ್ಣ ಶಿಥಿಲಗೊಂಡಿಲ್ಲ. ಸಂಪೂರ್ಣ ಶಿಥಿಲಗೊಳ್ಳುವ ತನಕ ಮುಂಗಾರು ಚುರುಕಾಗಿರಬಹುದು.
No comments:
Post a Comment