ಕಾಸರಗೋಡು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಒಣ ಹವೆಯೊಂದಿಗೆ ತೀವ್ರ ಛಳಿಯ ವಾತಾವರಣ ಮುಂದುವರಿಯಲಿದೆ.
ಉತ್ತರ ಭಾರತದ ಅಸ್ವಾಭಾವಿಕ ತಿರುಗುವಿಕೆಯ ಕಾರಣದಿಂದ ಉತ್ತರದ ಶೀತ ಮಾರುತಗಳು ದಕ್ಷಿಣದ ರಾಜ್ಯಗಳ ಕಡೆ ಅಧಿಕ ಪ್ರಮಾಣದಲ್ಲಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ತೀವ್ರ ಛಳಿಯ ವಾತಾವರಣ ಸೃಷ್ಟಿಯಾಗಿದೆ.
ಡಿಸೆಂಬರ್ 15ರಂದು ಈ ತಿರುಗುವಿಕೆಯ ವ್ಯಾಪ್ತಿ ವಿಸ್ತಾರಗೊಂಡು ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಬೀಸಲು ಆರಂಭವಾಗಲಿದೆ. ಇದರಿಂದ ರಾಜ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗುವ ಲಕ್ಷಣಗಳಿವೆ.
ಡಿಸೆಂಬರ್ 15 ಮುಂಜಾನೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ಡಿಸೆಂಬರ್ 16 ಹಾಗೂ 17ರಂದು ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ.
ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಡಿಸೆಂಬರ್ 16, 17ರಂದು ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರ ಮೋಡದ ವಾತಾವರಣ ಇರಬಹುದು.
ಡಿಸೆಂಬರ್ 18 ಅಥವಾ 19ರಿಂದ ಮತ್ತೆ ತೀವ್ರ ಛಳಿಯ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ.